ಶರಣಂ ಅಯ್ಯಪ್ಪಾ
ಲೇಖನಗಳು
ಸ್ವಾಮಿ ಶರಣಂ : ಅರ್ಥವೇನು?
ಪಿ.ಕೆ. ಸುರೇಂದ್ರನ್
“ಸ್ವಾಕಾರೋಚ್ಚಾರ ಮಾತ್ರೇಣ
ಸ್ವಾಕರಂ ದೀಪ್ಯತೇ ಮುಖೇ
ಮಕಾರಾಂತ ಶಿವಂಪ್ರೋಕ್ತಂ
ಇಕಾರಂ ಶಕ್ತಿರೂಪ್ಯತೇ"
‘ಸ್ವಾಮಿ ಶರಣಂ’ ನ ‘ಸ್ವಾ’ ಎಂಬ ಅಕ್ಷರವನ್ನು ಮಾತ್ರ ಉಚ್ಚರಿಸುವುದರಿಂದ ಪರಬ್ರಹ್ಮದಿಂದ ಹೊಳೆಯುವ ಆತ್ಮಪ್ರಜ್ಞೆ ತೀರ್ಥಾಟನೆ ಮಾಡುವವರ ಮುಖದಲ್ಲಿ ಪ್ರತಿಬಿಂಬಿಸಬೇಕು. ‘ಮ’ ಶಿವನನ್ನು ಸೂಚಿಸುತ್ತದೆ. ‘ಇ’ ಶಕ್ತಿಯನ್ನು ಸೂಚಿಸುತ್ತದೆ. ಎರಡೂ ಸೇರಿ ‘ಮಿ’ ಆಗುವಾಗ ಶಿವಶಕ್ತಿಯ ಸಾನಿಧ್ಯವಾಗುತ್ತದೆ. ಶಿವಶಕ್ತಿಯು ಈ ಹಿಂದೆ ಹೇಳಿದ ‘ಸ್ವಾ’ದೊಂದಿಗೆ ಸೇರಿಕೊಂಡು ಯಾತ್ರಾರ್ಥಿಗೆ, ತೀರ್ಥಾಟಕನಿಗೆ ಆತ್ಮಸಾಕ್ಷಾತ್ಕಾರ ಪಡೆಯಲು ಸಹಾಯಕವಾಗುತ್ತದೆ. ಜೀವಾತ್ಮ ಮತ್ತು ಪರಮಾತ್ಮನ ಐಕ್ಯವನ್ನು ಸೂಚಿಸುವಂತೆ ‘ಸ್ವತ್ವ’ದ ಮತ್ತು ಪರಮಾತ್ಮನ ಅಸ್ತಿತ್ವವನ್ನು ಈ ಶಬ್ದವು ಸೂಚಿಸುತ್ತದೆ.
ಭಶಂ ಬೀಜಂ ಶತ್ರುಸಂಹಾರಂ
ರೇಷಂ ಜ್ಞಾನಾಗ್ನಿ ವಾಚಕಂ
ಣಕಾರಂ ಸಿದ್ಧಿತಂ ಶಾಂತಂ
ಮುದ್ರಾ ವಿನಯ ಸಾಧನಂ
‘ಶರಣಂ’ ಎಂಬ ಪದದ ಮೊದಲ ಅಕ್ಷರವಾದ ‘ಶ’ ಉಚ್ಚಾರದಿಂದ ಮಾತ್ರ ಶತ್ರು ಇಲ್ಲದಂತಾಗುತ್ತದೆ. ಅಗ್ನಿಯನ್ನು ಜ್ವಲಿಸುವಂತೆ ಮಾಡುವ ‘ರ’ ಎಂಬ ಪದ ಜ್ಞಾನವನ್ನು ಸೂಚಿಸುತ್ತದೆ. ‘ಣಂ’ ಎಂಬ ಅಕ್ಷರ ಇದೆಲ್ಲವನ್ನೂ ದೇವತ್ವದೆಡೆ ಕೊಂಡೊಯ್ದು ಶಾಂತಿಯನ್ನು ನೀಡುತ್ತದೆ. ಇದು ಮನುಷ್ಯನ ವಿನಯವನ್ನು ರೂಪಿಸುವ ಒಂದು ಸೂತ್ರವಾಕ್ಯವೂ ಆಗಿದೆ. ಹದಿನೆಂಟು ಮೆಟ್ಟಿಲುಗಳನ್ನು ಏರುವ ಒಬ್ಬನು ವಿನಯಿಯಾಗಿರಬೇಕೆಂದೂ ಅವನು ಅಹಂಕಾರವನ್ನು ಪೂರ್ಣವಾಗಿ ಬಿಟ್ಟವನಾಗಿರಬೇಕೆಂಬ ವಿಚಾರವನ್ನೂ ಇದು ಸ್ಪಷ್ಟಗೊಳಿಸುತ್ತದೆ.