ಶರಣಂ ಅಯ್ಯಪ್ಪಾ
ಲೇಖನಗಳು
ಮುಸ್ಲಿಂ ಸಿದ್ಧನಾದ ವಾವರ
ಸತೀಶ್ಚಂದ್ರನ್ ಮಲ್ಲಪ್ಪಳ್ಳಿ
ಮತಗಳು ನಾಡಾದ ಭಾರತದಲ್ಲಿ ಸಮನ್ವಯದ ಶಂಖನಾದ ಮೊಳಗುವ ಒಂದು ಶಾಂತಭೂಮಿ ಶಬರಿಮಲೆ ಸನ್ನಿಧಾನ. ಭೂತನಾಥನು ಯೋಗಸಮಾಧಿ ಪಡೆದ ಪೂಂಗಾವನದಲ್ಲಿ ಮುಸ್ಲಿಂ ಸಿದ್ಧನಾದ ವಾವರನು ಕಾವಲು ನಿಲ್ಲುವಾಗ ಮಹಿಷೀವರ್ದನದ ಮೂಲಕ ಅವತಾರದ ಉದ್ದೇಶದಿಂದ ಈಡೇರಿದ ಎರುಮೇಲಿಯಲ್ಲಿ ಶರಣಂತ್ರ, ಬಾಂಕು ಕೆರೆ, ಇಗರ್ಜಿಯ ಗಂಟೆಗಳು ಮತಸೌಹಾರ್ದದ ಸಮೂಹಗಾನವನ್ನು ಆಲಾಪಿಸುತ್ತವೆ. ಐತಿಹಾಸಿಕ ಸತ್ಯಗಳು, ಐತಿಹ್ಯದ ಕಲ್ಪನೆಗಳು ಹಾಸುಹೊಕ್ಕಾಗಿರುವ ಅಯ್ಯಪ್ಪನ ಇತಿಹಾಸದಲ್ಲಿ ವಾವರನ ಕಥೆಗೆ ಪ್ರತ್ಯೇಕ ಸ್ಥಾನವಿದೆ. ಹಿಂದೂ- ಮುಸ್ಲಿಂ ಮೈತ್ರಿಯ ಉತ್ತಮ ಮಾದರಿಗಳನ್ನು ಅವುಗಳಲ್ಲಿ ಕಾಣಬಹುದು.
ಭೂತನಾಥೋಪಾಖ್ಯಾನ ಎಂಬ ಸಂಸ್ಕೃತ ಗ್ರಂಥದಲ್ಲಿ ಶಾಸ್ತಾರನ ಅಂಗರಕ್ಷಕನಾಗಿ ಬರುವ ವಾವರ ಮತ್ತು ಶಾಸ್ತಂಪಾಟುಗಳಲ್ಲಿ ಅಯ್ಯಪ್ಪನ ಆಪ್ತಮಿತ್ರನಾಗಿ ಕಾಣಿಸಿಕೊಳ್ಳುವ ವಾವರ ಇಬ್ಬರು ಬೇರೆ ಬೇರೆಯೆಂಬ ನಂಬಿಕೆಗೆ ಹೆಚ್ಚು ಪ್ರಚಾರವಿದೆ. ಪಂದಳರಾಜನ ಇಂಗಿತವನ್ನರಿತು ರಾಣಿಗೆ ಹುಲಿಯ ಹಾಲನ್ನು ತರಲು ಅರಣ್ಯಕ್ಕೆ ಹೋದ ಅಯ್ಯಪ್ಪನು ಅಳುದಾ ನದಿಯಲ್ಲಿ ಮಹಿಷಿಯೊಂದಿಗೆ ಹೋರಾಡಬೇಕಾಗಿ ಬಂತು. ಶತ್ರುನಿಗ್ರಹದ ನಂತರ ಪಂದಳಕ್ಕೆ ಹಿಂತಿರುಗುವಾಗ ಭೂತಗಣದಲ್ಲಿ ಸದಸ್ಯನಾದ ವಾವರನನ್ನು ಕರೆದು ಆ ಹಾದಿಯಾಗಿ ಬರುವ ಸಾಗುವ ಭಕ್ತರಿಗೆ ದುಷ್ಟಮೃಗಗಳಿಂದ ತೊಂದರೆಯಾಗದೆಂತೆ ನೋಡಿಕೊಳ್ಳುವಂತೆ ಅಯ್ಯಪ್ಪನು ಆಜ್ಞಾಪಿಸಿದನು.
ಅನಂತರ ಅಯ್ಯಪ್ಪ ಕ್ಷೇತ್ರ ನಿರ್ಮಾಣಕ್ಕಾಗಿ ಶಬರಿಮಲೆಯ ಪ್ರಯಾಣದ ನಡುವೆ ಎರುಮೇಲಿಗೆ ತಲುಪಿದ ಪಂದಳರಾಜನು ಕೋಟೆಯಂತೆ ರಕ್ಷಿಸುತ್ತಿದ್ದ ವಾವರನಿಗೆ ಕ್ಷೇತ್ರವನ್ನು ನಿರ್ಮಿಸಿಕೊಟ್ಟಿರುವುದಾಗಿ ಭೂತನಾಥೋಪಾಖ್ಯಾನದಲ್ಲಿ ಉಲ್ಲೇಖಿಸಲಾಗಿದೆ. ಅಯ್ಯಪ್ಪನೊಂದಿಗೆ ಯುದ್ಧ ಮಾಡಿ ಸಂಧಾನಕ್ಕೆ ಒಪ್ಪಿದ ನಂತರ ನಂಬಿಕೆಯ ಮಿತ್ರನಾಗಿ ಬದಲಾದ ವಾವರನ ಚಿತ್ರಣ ಅಯ್ಯಪ್ಪ ಗೀತೆಗಳಲ್ಲಿ ಕಂಡುಬರುತ್ತದೆ. ಕೈವಾಕ್ಕಿ ವಿದ್ದೂಟ್ಟಿಯಾ ಎಂಬ ಅರಬಿ ಗ್ರಂಥವು ವಾವರನ ಪೂಜೆಯ ಪವಿತ್ರ ಪುಸ್ತಕವಾಗಿದೆ. ವಾವರ ಮಹಾತ್ಮೆ ಎಂಬ ಗ್ರಂಥದಲ್ಲಿ ಮಕ್ಕಂಪುರದ ಇಸ್ಮಯಿಲ್ ಗೋತ್ರದ ಪಾತುಮ್ಮಳ ಮಗನಾಗಿ ಜನಿಸಿದವನು ವಾವರ ಎಂದು ದಾಖಲಿಸಲಾಗಿದೆ.
ತಕೃತತ್ತಾನ್ ತೋಟದಲ್ಲಿ ಜನಿಸಿದ ವಾವರನಿಗೆ ಬದುದ್ದೀನ್, ಸಿಂತಾರ್ಸ, ಮದಾರ್ಸ, ಬೋಬರ್, ಹಲಿಯಾನ್ ಹೀಗೆ ಹಲವಾರು ಹೆಸರುಗಳಿದ್ದುವೆಂದು ಹೇಳಲಾಗಿದೆ. ತಕೃತತ್ತಾನ್ ತೋಟವು ತುರ್ಕಿಸ್ತಾನದ ಇನ್ನೊಂದು ಹೆಸರೆಂದೂ ವಾವರ್ ಎಂಬುದು ಬಾಬರ ನ ಪಾಠಾಂತರವೆಂದೂ ಭಾವಿಸಿ ಹಳೆಯ ಬಾಬರ ಚಕ್ರವರ್ತಿಯ ಶೌರ್ಯದ ಕಥೆಗಳ ಪುನರಾಖ್ಯಾನವಾಗಿ ವಾವರ ಕಥೆಯ ಬಗ್ಗೆ ಸಂಶಯಪಡುವವರೂ ಇದ್ದಾರೆ. ಆನೆಯ ಮೇಲೇರಿದ ಅಯ್ಯಪ್ಪನೂ ಅಶ್ವಾರೂಢನಾದ ವಾವರನೂ ಪರಸ್ಪರ ಯುದ್ಧ ಮಾಡಿ ಜಯಾಪಜಯ ನಿರ್ಣಯಿಸಲಾಗದೆ ಉಳಿದುದಾಗಿ ಒಂದು ಹಾಡಿನಲ್ಲೂ, ಹಡಗಿನ ನಾವಿಕನಾದ ವಾವರನು ಸುಂಕ ನೀಡದಿರುವುದರಿಂದಾಗಿ ಸಿಟ್ಟುಗೊಂಡ ಅಯ್ಯಪ್ಪನು ಪುರಕಾಟ್ಟು ಎಂಬಲ್ಲಿ ನಡೆದ ಯುದ್ಧದಲ್ಲಿ ಹಡಗಿನ ಧ್ವಜಸ್ತಂಭವನ್ನು ತುಂಡರಿಸಿರುವುದಾಗಿಯೂ ಇದರಿಂದಾಗಿ ವಾವರನು ಕಪ್ಪವಾಗಿ ಕೈಯಲ್ಲಿದ್ದ ಬಳೆಯನ್ನೇ ತೆಗೆದುಕೊಟ್ಟು ಸ್ನೇಹಸಂಬಂಧವನ್ನು ಸ್ಥಾಪಿಸಿರುವುದಾಗಿ ಇನ್ನೊಂದು ಹಾಡಿನಲ್ಲಿ ಚಿತ್ರಿಸಲಾಗಿದೆ.
ಪಾಂಡಿಶ್ಶೇವಂ, ಪಂದಳಶ್ಶೇವಂ, ಎಳವಶ್ಶೇವಂ, ಪುಲಿಪ್ಪಾಲ್‌ಶ್ಶೇವಂ, ಪಾಲಾಳಿಮಥನಂ, ಈಳವಶ್ಶೇವಂ, ವಾವರಕಂ ಎಂಬಿವು ಶೂರ್ಪಕನ್ ಎಂಬ ಕವಿ ಅಯ್ಯಪ್ಪನ್ ವಿಳಕ್ಕಿಗೆ ಹಾಡುವ ಹಾಡುಗಳಾಗಿವೆ. ವಾವರ ಮತ್ತು ಅಯ್ಯಪ್ಪನ ಯುದ್ಧದ ನೃತ್ಯಾವಿಷ್ಕಾರವೇ ವಾವರಕಂ. ಲುಂಗಿ, ಬೆಲ್ಟು ಮತ್ತು ಹಸಿರು ಟೊಪ್ಪಿಯನ್ನು ಧರಿಸಿದ ವಾವರನು ಅಯ್ಯಪ್ಪನೊಂದಿಗೆ ಯುದ್ಧ ಮಾಡಿದ ನಂತರ ಸಂಧಿಮಾಡಿಕೊಳ್ಳುವುದೇ ಹಾಡಿನ ಸಾರಾಂಶ. ಹುಲಿಹಾಲಿಗಾಗಿ ಹೋದ ಅಯ್ಯಪ್ಪನನ್ನು ಎದುರಿಸಿದ ವಾವರನನ್ನು ಕಡುತ್ತ ಮತ್ತು ಅಯ್ಯಪ್ಪ ಒಟ್ಟಾಗಿ ಸೋಲಿಸಿರುವುದಾಗಿ ಕಥೆ ಹೇಳುತ್ತದೆ. ಮಲೆಗಳಲ್ಲಿ ಸುಲಭವಾಗಿ ಸಿಗುವ ಕರಿಮೆಣಸು ಅಯ್ಯಪ್ಪನೊಂದಿಗೆ ಸ್ನೇಹ ಮಾಡಿಕೊಳ್ಳಲು ವಾವರನನ್ನು ಪ್ರೇರೇಪಿಸಿತೆಂದು ಕೆಲವರು ಭಾವಿಸುತ್ತಾರೆ. ವಾವರ ನಡೆಯಲ್ಲಿ ಕರಿಮೆಣಸು ವಿಶೇಷನೆಂಬುದೇ ಇದಕ್ಕೆ ಆಧಾರ.
ಪಾಂಡ್ಯರಾಜನ ಆದೇಶದಂತೆ ಹುಲಿಹಾಲನ್ನು ಹುಡುಕಿ ಹೊರಟ ಅಯ್ಯಪ್ಪನಿಗೆ ಸಹಾಯಕನಾದ ವಾವರನ ಕುರಿತಾಗ ಕಥೆಗಳೂ ಹೆಚ್ಚು ಪ್ರಚಾರವಿದೆ. ವಾವರ ಒಬ್ಬ ಮುಸ್ಲಿಂ ಸಿದ್ಧನೆಂದೂ ಅಯ್ಯಪ್ಪನ ನಂಬಿಗಸ್ಥನಾದ ಮಿತ್ರನೆಂಬ ನಂಬಿಕೆಗೆ ಹೆಚ್ಚು ಪ್ರಭಾವವಿದೆ. ಪಂದಳರಾಜನಂತೆಯೇ ವಾವರನ ಕುಟುಂಬವೂ ತಮಿಳುನಾಡಿನಿಂದ ಕೇರಳಕ್ಕೆ ಬಂದು ತಲುಪಿತು. ಪುನ್ನಕೋಡು, ಚಿಲ್ಲನಾಯ್ಕಪಟ್ಟಿ ಎಂಬೀ ಗ್ರಾಮಗಳ ಪೂರ್ವದಲ್ಲಿರುವ ಅವಿರಾಂಕೋಯಿಲ್ ಎಂಬ ಸ್ಥಳದಿಂದ ವಾವರನ ಮುಂದಿನ ಪೀಳಿಗೆಯವರು ತಿರುವಾಂಕೂರಿಗೆ ತಲುಪಿದರು.
ಶಾಲಿವಾಹನ ಶಕ ವರ್ಷ ೪೪೪೧ರಲ್ಲಿ ಕಾಞ್ಞಿರಪ್ಪಳ್ಳಿಯ ಪಿಚ್ಚಗಪ್ಪಳಿ ಬೆಟ್ಟದ ಮಸೀದಿಮನೆಯಲ್ಲಿ ಇವರು ವಾಸವನ್ನಾರಂಭಿಸಿದರು. ಕೊಲ್ಲಂ ಶಕವರ್ಷ ೯೧೫ರ ನಂತರ ಮಲ್ಲಪ್ಪಳ್ಳಿಯ ವಾಯಲ್‌ಪುರಕ್ಕೆ ಬಂದು ನೆಲೆಸಿದರು. ಕೊಲ್ಲಂ ಶಕವರ್ಷ ೮೮೪ರಲ್ಲಿ ವಾವರ್ ನಡೆಯಲ್ಲಿ ಅರ್ಚಕನಾಗಿದ್ದ ಮೊಲ್ಲವಿಯಾ ಬಹಾದೂರನ ಮಗ ಆಲಿಕುಞ್ಞಿಗೆ ರಾಮಸುಂದರಕೃಷ್ಣನು ನೀಡಿದ ತಾಮ್ರಪತ್ರದಲ್ಲಿ ಎರುಮೇಲಿ, ಕಾಳಕೆಟ್ಟಿ, ಇಂಜಿಪ್ಪಾರಕೋಟೆ, ಕರಿಮಲೆ, ಅಪ್ಪಾಚಿಮೇಡು, ಶಬರಿಮಲೆ, ವಾವರ ನಡೆ ಮೊದಲಾದವುಗಳ ಕೆಲವು ಅಧಿಕಾರಗಳನ್ನು ನೀಡಿರುವುದಾಗಿ ದಾಖಲಿಸಲಾಗಿದೆ. ಕೊಲ್ಲಂ ಶಕವರ್ಷ ೯೬೮ರಲ್ಲಿ ಶಿಂಕಾರಮಹಮ್ಮದನ ಹೆಸರಿಗೆ ಪಂದಳಂ ಪುಲಿಕ್ಕಾಟ್ಟು ಕಂಠನ್ ಕೇರುಳನ್ ನೀಡಿದ ಹಕ್ಕುಪತ್ರದಲ್ಲಿ ಕೆಲವು ಅಧಿಕಾರಗಳನ್ನು ನೀಡಲಾಗಿದೆ. ವಾವರನು ಆಯುರ್ವೇದ ಪಂಡಿತನಾಗಿದ್ದನೆಂದೂ ಇದರಲ್ಲಿ ಉಲ್ಲೇಖವಿದೆ.
ಹಕ್ಕುಪತ್ರ
ಕೊಲ್ಲಂಶಕವರ್ಷ ೯೬೮ನೆಯ ಕರ್ಕಟಕ ತಿಂಗಳಿನ ೧೫ನೆಯ ದಿನದಂದು ಬರೆಯುತ್ತಿರುವ ಮಹತ್ತರವಾದ ಹಕ್ಕುಪತ್ರ. ಅದಾಗಿ ಕಾಞ್ಞಿರಪ್ಪಳ್ಳಿ ಮುರಿಯನ್‌ಪಳ್ಳಿ ಮನೆಯಲ್ಲಿ ವಾಸಿಸುತ್ತಿರುವ ಶಿಂಗಾರು ಮಹಮ್ಮದುವಿಗೆ ತನ್ನ ಸ್ವಂತಕ್ಕಾಗಿ ನಮ್ಮ ವತಿಯಿಂದ ಬರವಣಿಗೆ ಅಭ್ಯಾಸವಿಲ್ಲದ; ಶಬರಿಮಲೆ ಕ್ಷೇತ್ರದಲ್ಲಿ ಆಯುರ್ವೇದ ಗುರುವಾದ ವಾವರಸ್ವಾಮಿಗೆ ತನ್ನ ಹೆಸರಿಗೆ ವರ್ಷಂಪ್ರತಿ ಮಕರವಿಳಕ್ಕು ಮಹೋತ್ಸವಕ್ಕೆ ಸಂಬಂಧಿಸಿ ಪ್ರತಿವರ್ಷ ಮುಟ್ಟಂಪುರತ್ತ್ ಗುರುತಿ ಬಗ್ಗೆ ೩೮ ಕಳಸೆ ಹೊಸ ಅಕ್ಕಿ, ೫೪ ಕಳಸೆ ಹಳೆ ಅಕ್ಕಿ, ಏಳೂವರೆಯಂತೆ ಚಿಕ್ಕ ಅಕ್ಕಿ, ೨ ತೊಲೆ ಸಾಂಬ್ರಾಣಿ, ೨ ತೊಲೆ ಶ್ರೀಗಂಧ, ೨ ತೊಲೆ ಕರ್ಪೂರ, ಒಂದೂವರೆ ತೆಂಗಿನೆಣ್ಣೆ, ೩೬ ಆಡನ್ನು ಕಟ್ಟಿ ಜೊತೆಗೆ ೧೦೦೦ ಹಣವನ್ನು ಈ ಬಗ್ಗೆ ಸಾಮಗ್ರಿಗಳನ್ನು ಸದ್ರಿ ಕ್ಷೇತ್ರಕ್ಕೆ ಹೋಗಿ ಪ್ರತಿವರ್ಷ ಬಂದು ಪಡೆದುಕೊಂಡು ಈ ಉತ್ಸವಕ್ಕೆ ಸಂಬಂಧಿಸಿದ ಪೂಜಾದಿ ಕ್ರಿಯೆಗಳನ್ನು ನೀವು ಮತ್ತು ನಿಮ್ಮ ಕುಟುಂಬದೊಂದಿಗೆ ಅನುಷ್ಠಾನಗೊಳಿಸುವುದು. ಅದಕ್ಕಾಗಿ ನಿಮ್ಮ ವತಿಯಿಂದ ಮಾಡು ಮಾಡಿ ವಾಸಮಾಡುವುದಕ್ಕಾಗಿ ೪೦ ಕೋಲು ಚೈಕದ ಸ್ಥಳವನ್ನು ೧೮ ಮೆಟ್ಟಿಲುಗಳ ಕೆಳಗೆ ನೀಡಿರುವುದಾಗಿ ಶ್ರೀಮೊಹರು ಹೊಡೆದು ಕೊಟ್ಟಿರುತ್ತೇನೆ.
ಪುಲ್ಲಿಕಾಟ್ಟು ಕಂಠನ್ ಕೇರುಳನ್, ಪಂದಳಂ
೧೦೮೯ರಲ್ಲಿ ತಾಳಮಣ್ ತಂತ್ರಿಗಳಾದ ಕಂಠರು ಕೃಷ್ಣರು ಹುಜೂರಿಗೆ ಕಳುಹಿಸಿದ ಪತ್ರದಲ್ಲಿ ಶಬರಿಮಲೆಯಲ್ಲಿ ವಾವರಸ್ವಾಮಿ ಕ್ಷೇತ್ರ ಮತ್ತು ಬಹಳ ಹಿಂದೆಯೇ ಪ್ರತಿಷ್ಠೆಯೂ ಇದ್ದುದಾಗಿ ಹೇಳಲಾಗಿದೆ. ವಾವರನ ಮುಂದಿನ ಪೀಳಿಗೆಯವರಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ವಾಯ್‌ಪೂರ್ ಚೆರುತೋಡು ವಳಿ ಮುರಿಯಿಲ್ ವೆಟ್ಟಿಪ್ಲಾಕ್ಕಲ್ ಅಮೀರ್‌ಖಾದಿ ಸೈನುದ್ದೀನ್ ಬಹದೂರ್‌ಬಾವರಲಿ ಮುಸಿಲಿಯಾರ್ ಆಗಿದ್ದರು. ಇವರ ಕಾಲಾನಂತರ ಹಕ್ಕಿಗಾಗಿ ಉತ್ತರಾಧಿಕಾರಿಗಳು ನ್ಯಾಯಾಲಯದ ಮೊರೆಹೊಕ್ಕರು. ಟ್ರಸ್ಟನ್ನು ರೂಪಿಸಿ ಪೂಜೆಯನ್ನು ಮುಂದುವರಿಸಲು ನ್ಯಾಯಾಲಯ ಆಜ್ಞೆ ಹೊರಡಿಸಿದುದರ ಪರಿಣಾಮವಾಗಿ ಮಗನಾದ ಕಣ್ಣಕ್ಕರ ಬದರುದ್ದೀನ್ ಮುಸ್ಲಿಯಾರ್ ಅಧಿಕಾರ ವಹಿಸಿಕೊಂಡರು. ಅವರು ರೋಗ ಶಯ್ಯೆಗೆ ಸಂದಾಗ ಮಾನ್ನಾರ್ ಸೈಫುದ್ದೀನ್ ಮುಸ್ಲಿಯಾರ್ ಶಬರಿಮಲೆಯ ವಾವರ ಕಟ್ಟದಲ್ಲಿ ಅರ್ಚಕರಾದರು. ಪಾಡಿಮಣಿಯೆ ಸಿದ್ಧಿಕ್ ಮುಸ್ಲಿಯಾರ್, ವಾಯ್‌ಪುರ ಜಬ್ಬಾರ್ ಮುಸ್ಲಿಯಾರ್ ಮೊದಲಾದವರು ಸಹ ಅರ್ಚಕರಾದರು. ವಾವರನ ಇಂದಿನ ಪೀಳಿಗೆ ಪರಂಪರಾಗತವಾಗಿ ದೊರೆತ ಅರಬಿ ಯುನಾನಿ, ಜ್ಯೋತಿಷ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಕಾರ್ಯವೆಸಗುತ್ತಿದ್ದಾರೆ. ಶಬರಿಮಲೆಯ ವಾವರ ನಡೆಯಲ್ಲಿ ದೊರೆಯುವ ಆದಾಯದ ಕಾಲುಭಾಗವನ್ನು ದೇವಸ್ವಂ ಬೋರ್ಡಿಗೆ ನೀಡಿದ ನಂತರ ಉಳಿದುದನ್ನು ಕುಟುಂಬದವರು ಪಾಲು ಮಾಡಿಕೊಳ್ಳುತ್ತಾರೆ. ಅಭೀಷ್ಟಸಿದ್ಧಿಗಾಗಿಯೂ ಮೃತರಾದವರ ಮೋಕ್ಷಪ್ರಾಪ್ತಿಗಾಗಿಯೂ ಇರುವ ಪೂಜೆಗಳು ವಾವರ ನಡೆಯಲ್ಲಿ ಹೆಚ್ಚಾಗಿ ನಡೆಯುತ್ತವೆ. ದಿಕ್ಕೀರ್, ಸಲಾತ್, ರಾತ್ತೀಫ್, ಮೌಲೋದು ಇತ್ಯಾದಿ ಅವುಗಳಲ್ಲಿ ಕೆಲವು.
ಕಾಣಿಕೆಗೆ ಹೊರತಾಗಿ ಕರಿಮೆಣಸು, ಭತ್ತ, ಶ್ರೀಗಂಧ, ಸಾಂಬ್ರಾಣಿ, ಪನ್ನೀರು, ತುಪ್ಪ, ತೆಂಗಿನಕಾಯಿ, ಮೊದಲಾದವುಗಳನ್ನು ಸೇವೆಯಾಗಿ ಅರ್ಪಿಸುತ್ತಾರೆ. ಸುಗಂಧದ್ರವ್ಯವನ್ನೂ ಪ್ರಾಣಿಗಳನ್ನೂ ಕೆಲವರು ಸಮರ್ಪಿಸುತ್ತಾರೆ. ವಾಯ್‌ಪುರಿಯ ವಾವರ ಕುಟುಂಬದ ಅಧೀನದಲ್ಲಿಲ್ಲದಿದ್ದರೂ ಎರುಮೇಲಿಯಲ್ಲೂ ವಾವರ ಮಸೀದಿಯಿದೆ. ಅಂಬಲಪ್ಪುಳ ಪೇಟ್ಟತ್ತುಳ್ಳಲ್ ಮಸೀದಿಯನ್ನು ಸಂದರ್ಶಿಸಿದ ನಂತರ ವಲಿಯಂಬಲಕ್ಕೆ ಹೋಗುವುದು ಪದ್ಧತಿ. ಈ ಮಧ್ಯೆ ಶಿಲುಬೆ ಇಗರ್ಜಿಗೂ ಹೋಗುವುದಿದೆ.
ವರ್ಗ, ವರ್ಣ ವೈಚಿತ್ರ್ಯಗಳು ನಿರ್ಮಿಸಿದ ಗೋಡೆಗಳಿಂದ ಶಿಥಿಲವಾದ ಮಾನವ ಸೌಹಾರ್ದ ಮರೆಯಾದಾಗ ಕ್ಷೇತ್ರ, ಮಸೀದಿ, ಇಗರ್ಜಿಗಳು ಸೇರಿಕೊಂಡು ಇಲ್ಲಿ ಬೇಲಿಗಳನ್ನು ಮುರಿದುಹಾಕುತ್ತವೆ. ಸಮಾನತೆಯ ಮತ್ತು ಸೌಹೋದರ್ಯದ ಘೋಷಣೆಯೊಂದಿಗೆ ಅಯ್ಯಪ್ಪ ಮತ್ತು ವಾವರ ಇಲ್ಲಿ ಮೋಕ್ಷಪಥದಲ್ಲಿ ಮಾದರಿಯನ್ನು ನೀಡುತ್ತಿದ್ದಾರೆ.