ತೀರ್ಥಯಾತ್ರೆ
ಪೂಂಗಾವನಂ
ಪೂಂಗಾವನಂ

ಪಂಪಾದಿಂದ ಕಠಿಣವಾದ ಮಲೆಯನ್ನು ಏರಿ ಸ್ವಾಮಿ ಸನ್ನಿಧಾನವನ್ನು ತಲುಪುವ ಭಕ್ತರಿಗೆ ಅನಿರ್ವಚನೀಯವಾದ ಅನುಭವವಾಗುತ್ತದೆ. ಕಡಿದಾದ ನೀಲಿಮಲೆ ಏರುವಿಕೆ ಕಠಿಣವಾದರೂ ಸ್ವಾಮಿಯ ಪೂಂಗಾವನಕ್ಕಿರುವ ಯಾತ್ರೆ ಅವರನ್ನು ಆನಂದಚಿತ್ತರನ್ನಾಗಿಸುತ್ತದೆ. ಪಂಪಾ ನದಿಯಲ್ಲಿ ಸ್ನಾನ ಮಾಡಿ ಪಾಪ ವಿಮುಕ್ತರಾಗುವ ಭಕ್ತರು ಇರುಮುಡಿ ಕಟ್ಟನ್ನು ತಲೆಯಲ್ಲಿ ಇಟ್ಟುಕೊಂಡು ಮಲೆ ಏರುವಿಕೆಯನ್ನು ಪ್ರಾರಂಭಿಸುತ್ತಾರೆ. ಈ ಹನುಮಾನ್ ಕ್ಷೇತ್ರಗಳಲ್ಲಿ ಆರಾಧನೆ ಮಾಡಿ ಪಂದಳ ರಾಜನ ಸ್ಥಳವನ್ನು ಸಂದರ್ಶಿಸಿ ಪ್ರಸಾದವನ್ನು ಸ್ವೀಕರಿಸಿ ಮಲೆ ಏರಲು ಆರಂಭಿಸುವರು. ಕಡಿದಾದ ನೀಲಿಮಲೆಯನ್ನು ಏರಿ ಅಪ್ಪಾಚಿಮೇಡಿಗೆ ತಲುಪಿದಾಗ ಕನ್ನಿಸ್ವಾಮಿಗಳು ಅಕ್ಕಿಯಿಂದ ಮಾಡಿದ ಉಂಡೆಯನ್ನು ಕೆಳಕ್ಕೆ ಎಸೆಯುತ್ತಾರೆ. ದುರ್ದೇವತೆಗಳ ಪ್ರೀತ್ಯರ್ಥವಾಗಿ ಇದನ್ನು ಮಾಡಲಾಗುತ್ತದೆ.
ಅನತಿ ದೂರ ನಡೆದಾಗ ಶಬರೀಪೀಠವನ್ನು ತಲುಪುತ್ತೇವೆ. ಶಬರಿಯು ಇಲ್ಲಿಂದ ಸ್ವರ್ಗಾರೋಹಣ ಮಾಡಿದಳೆಂಬ ನಂಬಿಕೆ. ಅಯ್ಯಪ್ಪ ವ್ರತಧಾರಿಗಳು ಶಬರೀಪೀಠದಲ್ಲಿ ತೆಂಗಿನಕಾಯಿ ಒಡೆದು, ಕರ್ಪೂರ ಉರಿಸಿ, ಸೇವೆ ಸಲ್ಲಿಸಿ ಮಲೆ ಏರುವಿಕೆಯನ್ನು ಮುಂದುವರಿಸುತ್ತಾರೆ. ಮುಂದೆ ಸಮತಲವಾದ ಮರಕ್ಕೂಟವನ್ನು ತಲುಪುವರು. ಪಂಪಾದಿಂದ ಬೇರ್ಪಡುವ ಅಯ್ಯಪ್ಪನ್ ಮಾರ್ಗ ಇಲ್ಲಿ ಸಂಗಮಿಸುವುದು. ಮುಂದಕ್ಕೆ ಶರಂಗುತ್ತಿ. ಕನ್ನಿ ಅಯ್ಯಪ್ಪ ವ್ರತಧಾರಿಗಳು ತಮ್ಮ ಕೈಯಲ್ಲಿರುವ ಶರವನ್ನು ಇಲ್ಲಿ ನೆಟ್ಟ ಬಳಿಕವೇ ಹದಿನೆಂಟು ಮೆಟ್ಟಿಲುಗಳನ್ನೇರಿ ಸ್ವಾಮಿ ದರ್ಶನ ಮಾಡಬಹುದು ಎಂಬ ನಂಬಿಕೆ.
ಸನ್ನಿಧಾನವನ್ನು ತಲುಪುವ ಅಯ್ಯಪ್ಪ ಭಕ್ತರು ಹದಿನೆಂಟು ಮೆಟ್ಟಿಲುಗಳ ಇಕ್ಕಡೆಗಳಲ್ಲಿರುವ ಕರುಪ್ಪುಸ್ವಾಮಿ ಮತ್ತು ಕಡುತ್ತ ಸ್ವಾಮಿಗಳ ದರ್ಶನ ಪಡೆದು, ತೆಂಗಿನಕಾಯಿ ಒಡೆದು ಶರಣು ಘೋಷ ಮಾಡುತ್ತಾ ಹದಿನೆಂಟು ಮೆಟ್ಟಿಲುಗಳನ್ನು ಏರಿ ಸ್ವಾಮಿ ಅಯ್ಯಪ್ಪನ ದರ್ಶನವನ್ನು ಪಡೆಯುವರು. ಮಾಲೆ ಧರಿಸಿ, ವ್ರತಾಚಾರಣೆ ಮಾಡಿ, ಇರುಮುಡಿ ಇಲ್ಲದವರು ಹದಿನೆಂಟು ಮೆಟ್ಟಿಲುಗಳನ್ನು ಏರುವಂತಿಲ್ಲ. ಅವರು ಉತ್ತರ ದಿಕ್ಕಿನಲ್ಲಿರುವ ಮೆಟ್ಟಿಲುಗಳ ಮೂಲಕ ಮೇಲೆ ಏರಿ ಸ್ವಾಮಿಯ ದರ್ಶನವನ್ನು ಪಡೆಯಬಹುದು. ಸನ್ನಿಧಾನದಲ್ಲಿರುವ ಭಸ್ಮಕೊಳದಲ್ಲಿ ಮುಳುಗುವ ಭಕ್ತರು ಪುನಃ ಸನ್ನಿಧಾನಕ್ಕೆ ಬಂದು ಉರುಳು ಸೇವೆಯನ್ನು ನಡೆಸುವರು. ಅಯ್ಯಪ್ಪ ದರ್ಶನಾನಂತರ ಅಯ್ಯಪ್ಪ ವ್ರತಧಾರಿಗಳು ಕನ್ನಿಮೂಲಕ ಗಣಪತಿಯನ್ನು ಮಾಳಿಗಪುರದ ಭಗವತಿಯನ್ನೂ ಮನಸಾ ಸ್ಮರಿಸುವರು.